ನನ್ನ ವಿದ್ಯಾರ್ಥಿ, ನನ್ನ ಹೆಮ್ಮೆ

ನನ್ನ ವಿದ್ಯಾರ್ಥಿ, ನನ್ನ ಹೆಮ್ಮೆ

 ಒಂದು ವರ್ಷದ ನನ್ನ ಫೆಲೋಶಿಪ್ ನ ಅವಧಿಯಲ್ಲಿ ನಾನು ಸಾಕಷ್ಟು ವ್ಯಕ್ತಿಗಳನ್ನು ನೋಡಿದೆ ಜೊತೆಗೆ ಸಾಕಷ್ಟು ಅನುಭವಗಳನ್ನು ಪಡೆದಿದ್ದೇನೆ .ಶಾಲೆ, ಆಫೀಸು, ಮನೆ ಕೆಲಸ ಇದೆ ನನ್ನ ಪ್ರಪಂಚವಾಗಿ ಬಿಟ್ಟಿತ್ತು .ನನಗೆ ಶಾಲೆಯಲ್ಲಿ ನನ್ನ ವಿದ್ಯಾರ್ಥಿಗಳ ಜೊತೆಗೆ ಕಾಲ ಕಳೆಯುವುದೆಂದರೆ ಬಹಳ ಇಷ್ಟವಾಗಿತ್ತು.
 ನನ್ನ ಶಾಲೆ ಇರುವುದು ಧಾರವಾಡ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾಗಿತ್ತು .ಊರಿನ ಪರಿಸರ ,ಜನ,ಭಾಷೆ, ಪದ್ಧತಿ ಎಲ್ಲವೂ ನನಗೆ ಹೊಸದಾಗಿತ್ತು. ಶಾಲೆಯ ದೊಡ್ಡದಾದ ಆವರಣ ಕಟ್ಟಡ ಅಲ್ಲಿನ ಸಾಲು ಸಾಲು ತೆಂಗಿನ ಮರ ತರಗತಿಗಳು ಇವೆಲ್ಲವೂ ನನಗೆ ಹೊಸ ಅನುಭವವನ್ನು ನೀಡಲು ಬರಮಾಡಿಕೊಳ್ಳುವಂತಿತ್ತು .ಅಲ್ಲಿನ ಶಿಕ್ಷಕರು ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಎಲ್ಲರೂ ನನಗೆ ಹೊಸ ವ್ಯಕ್ತಿಗಳಾಗಿದ್ದರು.


ಆಗಿನ್ನೂ ಅಗಸ್ಟ್ ತಿಂಗಳ ಪ್ರಾರಂಭ ಸೋನೆಮಳೆಯಂತೆ ಶಾಲೆಗೆ ಮಕ್ಕಳು ಬರುತ್ತಿದ್ದರು. ಕೊರೋನಾ ಎಂಬ ದೊಡ್ಡ ಭೂತದ ಭಯದಿಂದ ಅಡಗಿ ಕೂತಿದ್ದ ಮಕ್ಕಳು ನಿಧಾನವಾಗಿ ಮನೆಯಿಂದ ಹೊರಬರಲು ಪ್ರಾರಂಭಿಸುತ್ತಿದ್ದರು. ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದ್ದ ಶಾಲೆಯ ಆವರಣ ತರಗತಿಗಳು  ಅಲ್ಪಸ್ವಲ್ಪ ವಿದ್ಯಾರ್ಥಿಗಳಿಂದ ಕಳೆ ಪಡೆಯಲು ಆರಂಭಿಸಿತ್ತು .ಆಸಮಯದಲ್ಲಿ ನಾನು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಕಲಿಸಲು ಆರಂಭಿಸಿದ್ದೆ. ಅಷ್ಟು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯ ಮೇಲೆ ನನ್ನ ಗಮನ ಹರಿಯಿತು. ಅಗಲವಾದ ದೇಹ, ದುಂಡನೆಯ ಮುಖ, ಕಂದು ಬಣ್ಣ, ಸಾಧಾರಣ ಎತ್ತರ, ಮುದ್ದುಮುಖ ಆತನ ನಡವಳಿಕೆ ಕೆಲವು ನನಗೆ ಆಕರ್ಷಕವಾಗಿತ್ತು.


ಶಾಲೆ ಪ್ರಾರಂಭವಾಗಿ ಕೆಲವು ತಿಂಗಳುಗಳ ನಂತರ ನಾನು ಗಮನಿಸಿದ ವಿದ್ಯಾರ್ಥಿಯ ನಡವಳಿಕೆ ನನಗೆ ನಿಧಾನವಾಗಿ ತಿಳಿಯತೊಡಗಿತು. ಅವನು ಪ್ರತಿದಿನ ತನ್ನ ಸ್ನೇಹಿತರೊಂದಿಗೆ ಜಗಳವಾಡುತ್ತಿದ್ದ. ಒಮ್ಮೆಯಂತೂ ಒಬ್ಬ ನಾಲ್ಕನೇ ತರಗತಿಯ ಹುಡುಗನ ಕೈ ಕಚ್ಚಿ ಬಿಟ್ಟಿದ್ದ. ಆ ಚಿಕ್ಕ ಹುಡುಗನ ಕೈ ಮೇಲೆ ಈತನ ಅಲ್ಲಿನ ಅಚ್ಚುಗಳು ಮೂಡಿದ್ದವು. ರಕ್ತ ಸುರಿಯಲಾರಂಭಿಸಿತು ಅದನ್ನು ನೋಡಿದ ನನಗೆ ಆಶ್ಚರ್ಯವಾಗಿತ್ತು ಹುಡುಗನ ಮೇಲೆ  ಗದರಿದೆ. ಅದಾದ ನಂತರ ಪ್ರತಿ ತರಗತಿಯಲ್ಲೂ ಆತನದು ಒಂದು ಕೆಲಸ ಇದ್ದೇ ಇರುತ್ತಿತ್ತು. ಜಗಳವಾಡುವಾಗ ಅವನ ಮುಖ ಕೋಪದಿಂದ ಕಾಣಿಸುತ್ತಿತ್ತು.  ಆದರೆ ಅಭ್ಯಾಸದಲ್ಲಿ ಸ್ಪರ್ಧೆಗಳಲ್ಲಿ ಯಾವಾಗಲೂ ಹಿಂದೆ ಇರುತ್ತಿದ್ದ. ಆತನಿಗೆ ಬರೆಯುವುದೆಂದರೆ ಬಹಳ ಕಷ್ಟದ ಕೆಲಸವಾಗಿತ್ತು . ಆತನ ಆ ನಡವಳಿಕೆಯಿಂದ ಆತನನ್ನು ಖಾಸಗಿ ಶಾಲೆಯಿಂದ ವರ್ಗಾಯಿಸಲಾಗಿತ್ತು. ಇವನ ಕಾಟ ತಾಳಲಾರದೆ ಶಾಲೆಯಲ್ಲಿ ಒಬ್ಬ  ಶಿಕ್ಷಕಿ ಶಾಲೆಯನ್ನೇ ಬಿಟ್ಟು ಹೋದರು ಎಂದು ತರಗತಿಯಲ್ಲಿ ಮಕ್ಕಳು ಹಾಸ್ಯ ಮಾಡುತ್ತಿದ್ದರು .ಇನ್ನೂ ಕೆಲವರು ಆ ಹುಡುಗ ಒಬ್ಬ ಮಾನಸಿಕ ರೋಗಿ ಎಂದು ಹೀಯಾಳಿಸುತ್ತಿದ್ದರು.


ಶಾಲೆಯ ಶಿಕ್ಷಕರು ಆತನನ್ನು ತಿದ್ದಬೇಕೆಂದು ಕೂಡ ಮನಸ್ಸು ಮಾಡಲಿಲ್ಲ. ಇದೆಲ್ಲವನ್ನು ನೋಡಿದ ನನಗೆ ಆ ಹುಡುಗನನ್ನು ಒಬ್ಬ ಒಳ್ಳೆಯ ವಿದ್ಯಾರ್ಥಿಯನ್ನು ಆಗಿ ಮಾಡಬೇಕೆನಿಸಿತು. ಅವನೆಲ್ಲ ಋಣಾತ್ಮಕ ಗುಣಗಳನ್ನು ಹೊರತುಪಡಿಸಿ ಅವನಲ್ಲಿರುವ ಒಂದು ಧನಾತ್ಮಕ ಗುಣವನ್ನು ಎತ್ತಿ ಹಿಡಿಯಬೇಕೆಂದು ನಿರ್ಧರಿಸಿದೆ.


ಅವನ ನಡವಳಿಕೆಯನ್ನು ತಿದ್ದಲು ನಾನು ಆತನ ಪಾಲಕರನ್ನು ಕರೆಸಿ ಮಾತನಾಡಿದೆ .ಆದರೆ ಆತನ ತಾಯಿ ಮನೆಯಲ್ಲಿಯೂ ನಮ್ಮ ಮಾತನ್ನು ಕೇಳುವುದಿಲ್ಲ ಟೀಚರ್ ನೀವೇ ಏನಾದರೂ ಮಾಡಿ ಆತನನ್ನು ಸರಿ ಮಾಡಬೇಕು ಎಂದು ನನ್ನ ನನಗೆ ಜವಾಬ್ದಾರಿ ನೀಡಿದರು .ಒಂದು ದಿನ ಆತನನ್ನು ಕರೆದು ಮಾತನಾಡಿದೆ. ನನಗೆ ತಿಳಿದ ವಿಷಯವೆಂದರೆ ಆತನಿಗೆ ನಾನು ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದೆನು. ಇದನ್ನು ತಿಳಿದ ನನಗೆ ಬಹಳ ಸಂತೋಷವಾಯಿತು ಇದನ್ನೇ ಉಪಯೋಗಿಸಿಕೊಂಡು ನಾನು ಆತನಿಂದ ಪ್ರಮಾಣ ಮಾಡುವಂತೆ ಹೇಳಿದೆ. ನೀವು ಹೇಳಿದಂತೆ ಕೇಳುತ್ತೇನೆ ಎಂದು ನನಗೆ ಪ್ರಮಾಣ ಮಾಡಿದನು. ಅಂದಿನಿಂದ ಅವನು ತರಗತಿಯಲ್ಲಿ  ನನ್ನ ಮಾತನ್ನು ಚಾಚೂತಪ್ಪದೆ ಕೇಳಲು ಪ್ರಾರಂಭಿಸಿದ. ಪ್ರತಿದಿನ ಶಾಲೆಗೆ ಬೇಗ ಬರುತ್ತಿದ್ದ ಯಾರೊಂದಿಗೂ ಜಗಳವಾಡದೇ ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಿದ್ದ ನಾನು ಇಟ್ಟಂತಹ ಪರೀಕ್ಷೆಯಲ್ಲಿ 15 ಅಂಕಗಳಿಗೆ 13 ಅಂಕಗಳನ್ನು ಪಡೆದಿದ್ದ ವಿಜ್ಞಾನ ಮಾದರಿಗಳನ್ನು ಬಹಳ ಉತ್ಸಾಹದಿಂದ ಮಾಡುತ್ತಿದ್ದನು. ತರಗತಿಯ ಎಲ್ಲಾ ಚಟುವಟಿಕೆಗಳಲ್ಲಿ ಉತ್ತಮವಾಗಿ ಭಾಗವಹಿಸುತ್ತಿದ್ದ .ಪ್ರತಿದಿನ ಶಾಲೆಯ ಪ್ರಾರ್ಥನೆಯಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳ ಎದುರೆದುರು ವಚನಗಳನ್ನು ಧೈರ್ಯವಾಗಿ ಓದುತ್ತಿದ್ದ ಇದನ್ನು ನೋಡಿದ ಕೆಲ ಶಿಕ್ಷಕರು ಆಶ್ಚರ್ಯಗೊಂಡರು. ಈತನಿಗೆ ಓದಲು ಬರುತ್ತಾ? ಎಂದು ನನಗೆ ಪ್ರಶ್ನಿಸಿದ್ದರು ಆಗ ನಾನು ಹೆಮ್ಮೆಯಿಂದ ಹೌದು ಎಂದು ಉತ್ತರಿಸಿದ್ದೆ.

ಇದಾದ ನಂತರ ಶಾಲೆಯ ಕೊನೆಯ ತಿಂಗಳಲ್ಲಿ ವಿದ್ಯಾಪೋಷಕ್ ಹಾಗೂ ಸ್ಲ್ಯಾಮ್ ಔಟ್ ಲೌಡ್ ಅವರು ಏರ್ಪಡಿಸಿದ ಶೋಕೇಸ್ ಕಾರ್ಯಕ್ರಮದಲ್ಲಿ ಆ ಹುಡುಗ ಹೆಣ್ಣು ಮಗಳ ವೇಷಭೂಷಣವನ್ನು ಧರಿಸಿ ನಾಟಕವನ್ನು ಮಾಡಿದ ಇದನ್ನು ಕಂಡ ಎಲ್ಲ ಶಿಕ್ಷಕರಿಗೂ ಆಶ್ಚರ್ಯವಾಗಿತ್ತು. ಆದರೆ ನನಗೆ ಮಾತ್ರ ಹೆಮ್ಮೆಯ ವಿಷಯವಾಗಿತ್ತು.Comments