ಶಾಲಾ ಸಂಸತ್ ಚುನಾವಣೆ
ನಾವು ನಮ್ಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಿದೆವು. ಪೂರ್ವಭಾವಿ ದಿನದಂದು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದರು ನಂತರ ಅಭ್ಯರ್ಥಿಗಳಿಗೆ ಗುರುತಿನ ಚಿನ್ಹೆಯನ್ನು ನೀಡಲಾಯಿತು. ಎಲ್ಲ ಅಭ್ಯರ್ಥಿಗಳು ತಮ್ಮ ಪರವಾಗಿ ಪ್ರಚಾರ ಮಾಡಿದರು. ಪ್ರಚಾರದ ವೇಳೆಯಲ್ಲಿ ಎಲ್ಲರ ಗಮನ ಸೆಳೆದ ಪ್ರಶಾಂತ್. ಸ್ವತಃ ತಾನೇ ಮಣ್ಣಿನಿಂದ ಮೈಕ್ ತಯಾರಿಸಿ ಸ್ನೇಹಿತನ (ಶಿವರಾಜ್ )ಪರವಾಗಿ ಭರ್ಜರಿ ಪ್ರಚಾರ ಮಾಡಿ ಎಲ್ಲರ ಗಮನ ಸೆಳೆದ. ನಂತರ ಅಣುಕು ಮತದಾನ ಮಾಡುವುದರ ಮೂಲಕ ಮತದಾನದ ಬಗ್ಗೆ ಮಾಹಿತಿ ನೀಡಲಾಯಿತು. ಎಲ್ಲ ಶಿಕ್ಷಕರು ಸೆಕ್ಟರ್ ಅಧಿಕಾರಿ, ಮಾರ್ಗ ಅಧಿಕಾರಿ, PRO, PO2, PO3 ಮತ್ತು ಮತ ಎಣಿಕೆ ಅಧಿಕಾರಿಯಂತಹ ವಿಭಿನ್ನ ಪಾತ್ರಗಳನ್ನು ವಹಿಸಿಕೊಂಡರು. ನಾನು PO3 ಮತ್ತು ಮತ ಎಣಿಕೆಯ ಕರ್ತವ್ಯವನ್ನು ಮಾಡಿದೆನು . ಇದು ನನಗೆ ಹೊಸ ಅನುಭವವನ್ನು ನೀಡಿದೆ .ಇದರಿಂದ ಚುನಾವಣೆಯ ಕಾರ್ಯ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು. ಕೆಲವು ವಿದ್ಯಾರ್ಥಿಗಳು ಪೊಲೀಸ್, ಆಶಾ ಕಾರ್ಯಕರ್ತೆಯರು ಮತ್ತು ಚುನಾವಣಾ ಏಜೆಂಟ್‌ಗಳ ಪಾತ್ರವನ್ನು ವಹಿಸಿದರು. ಅವರು ತಮ್ಮ ವೇಷಭೂಷಣಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು ಮತ್ತು ಅವರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿದರು. ಎಲ್ಲಾ ವಿದ್ಯಾರ್ಥಿಗಳು ಮತದಾನಕ್ಕೆ ಆಧಾರ್ ಕಾರ್ಡ್‌ನೊಂದಿಗೆ ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಂಡರು. ಇದರಿಂದ ಎಲ್ಲಾ ವಿದ್ಯಾರ್ಥಿಗಳು ಮತದಾನದ ಬಗ್ಗೆ ಸ್ಪಷ್ಟವಾದ ಕಲ್ಪನೆಗಳು ಮತ್ತು ಜ್ಞಾನವನ್ನು ಪಡೆದರು. ಮತದಾನದ ಕೇಂದ್ರಕ್ಕೆ ಗ್ರಾಮಸ್ಥರು ಭೇಟಿ ನೀಡಿ ಈ ಕಾರ್ಯಕ್ಕೆ ಶ್ಲಾಘಿಸಿದರು. ನಂತರ ಎಲ್ಲ ಶಿಕ್ಷಕರು ಅಡುಗೆ ಸಹಾಯಕಿಯರು ಬಿಸಿಊಟ ಸರಬರಾಜುದಾರರು ಇಸ್ಕಾನ್ ಸಿಬ್ಬಂದಿಯವರು ಸಹ ಮತದಾನದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಿದೆವು. ಎಲ್ಲ ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು. ಇಡೀ ದಿನ ಹೊಸ ಅನುಭವಗಳು ಮತ್ತು ಹೊಸ ಕಲಿಕೆಗಳೊಂದಿಗೆ ಸಾಗಿತು.
Comments
Post a Comment