ಛಲವೊಂದಿದ್ದರೆ ಸಾಕು...
ಛಲವೊಂದಿದ್ದರೆ ಸಾಕು...
ನಾನು ಕೆಲವು ಫೆಲೋಟೀಚರ್ ಆಗಿ ಒಂದು ವರ್ಷ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನರೇಂದ್ರ ಇಲ್ಲಿ ಕಾರ್ಯನಿರ್ವಹಿಸಿದ ನಂತರ ಸಾಕಷ್ಟು ಬದಲಾವಣೆಯನ್ನು ನನ್ನಲ್ಲಿ ಕಂಡಿದ್ದೇನೆ. ಒಬ್ಬ ಉತ್ತಮ ಶಿಕ್ಷಕಿ ಆಗಲು ಬೇಕಾಗುವ ಸಾಮರ್ಥ್ಯವನ್ನು ನಾನು ಒಂದು ವರ್ಷದ ಅನುಭವದಿಂದ ಕಲಿತಿದ್ದೇನೆ.
ಈ ವರ್ಷ ವಿಜ್ಞಾನ ಹಾಗೂ ಗಣಿತ ವಿಷಯದ ಜೊತೆಗೆ ಇಂಗ್ಲೀಷ್ ವಿಷಯವೂ ಕೂಡ ಕಲಿಸಬೇಕೆಂದಾಯಿತು ಹಾಗಾಗಿ ನಾನು ಈ ವರ್ಷ ಆರನೇ ವರ್ಗದ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದೆ. ಈ ವರ್ಷ 6ನೇ ವರ್ಗದ ಮಕ್ಕಳು ತುಂಬಾ ವಿಧೇಯವಂತರು ಹಾಗೂ ಕ್ರಿಯಾಶೀಲರಾಗಿದ್ದರು. ಆದರೆ ಕೆಲ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಬಹಳ ಹಿಂದೆ ಉಳಿದಿದ್ದರು.
ಆ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ನಾನು ಸೂಕ್ಷ್ಮವಾಗಿ ಗಮನಿಸತೊಡಗಿದೆ. ಆತನಲ್ಲಿ ಏನನ್ನಾದರೂ ಕಲಿಯುವ ಸಾಮರ್ಥ್ಯವಿತ್ತು. ಆದರೆ ಕಲಿಯುವ ಮನಸ್ಸು ಆತನಿಗೆ ಇರಲಿಲ್ಲ. ಇಂಗ್ಲಿಷ್ ಶಿಕ್ಷಕಿಯಾಗಿ ನಾನು ಅವರಿಗೆ ಪಾಠ ಮಾಡಲು ಪ್ರಾರಂಭಿಸಿದ ನಂತರ ಪ್ರತಿ ವಿದ್ಯಾರ್ಥಿಯನ್ನು ನಾನು ಅಕ್ಷರಗಳನ್ನು ಓದಿಸುವ ಮೂಲಕ ಎಲ್ಲರನ್ನು ಪರೀಕ್ಷಿಸಿದೆ. ಆದರೆ ಈ ವಿದ್ಯಾರ್ಥಿಗೆ ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಲು ಕೂಡ ಕಷ್ಟವಾಗಿತ್ತು. ಹಾಗಾಗಿ ತರಗತಿಯಲ್ಲಿ ನಾನು ಚೆನ್ನಾಗಿ ಓದುವ ಮಕ್ಕಳ ಜೊತೆ ಅವನನ್ನು ಬೆರೆಸಿದೆ.
ಪ್ರತಿದಿನ ಅವನಿಗೆ ಹೋಂವರ್ಕ ಕೊಡುವಂತೆ ಅಕ್ಷರಗಳನ್ನು ಕಲಿಸುವಂತೆ ಪ್ರೋತ್ಸಾಹಿಸಿದೆ. ಪ್ರತಿವಾರ ನಾನು ಪ್ರತಿ ವಿದ್ಯಾರ್ಥಿಗೆ ಓದುವ ಸಾಮರ್ಥ್ಯ ಪರೀಕ್ಷಿಸುವಾಗ ಆ ಹುಡುಗ ಅಕ್ಷರಗಳನ್ನು ಗುರುತಿಸುವುದು ಕಲಿತಿದ್ದ. ಹೀಗೆ ಪ್ರತಿವಾರ ಆತ ಎರಡು ಮೂರು ಅಕ್ಷರದ ಪದಗಳನ್ನು ಓದಲು ಪ್ರಾರಂಭಿಸಿದ. ಆತನಿಗೆ ಇನ್ನೂ ಓದುವಂತೆ ನಾನು ತರಗತಿಯಲ್ಲಿ ಎಲ್ಲರ ಮುಂದೆ ಪ್ರಶಂಸಿಸುತ್ತಾ ಪಾಠಗಳನ್ನು ಓದಲು ಪ್ರೋತ್ಸಾಹಿಸಿದೆ. ಈಗ ಆತ ಪಾಠಗಳನ್ನು ಓದುವಷ್ಟು ಸಾಮರ್ಥ್ಯ ಬೆಳೆಸಿಕೊಂಡಿದ್ದಾನೆ. ಈ ಖುಷಿಗಾಗಿ ನಾನು ಬಹುಮಾನವನ್ನು ಕೂಡ ವಿತರಿಸಿದ್ದೆ.
ಎಲ್ಲ ಮಕ್ಕಳಲ್ಲೂ ಸಾಮರ್ಥ್ಯ, ಪ್ರತಿಭೆ ಇದ್ದೇ ಇರುತ್ತದೆ ಆದರೆ ಶಿಕ್ಷಕರಾದ ನಾವು ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಷ್ಟೇ. ಸಾಧಿಸುವ ಛಲವೊಂದಿದ್ದರೆ ಸಾಕು ನಾವು ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಆ ಹುಡುಗನೇ ಸಾಕ್ಷಿ.
Comments
Post a Comment