ಗಾಯತ್ರಿ - ಒಂದು ಅಪರೂಪದ ಚಿಟ್ಟೆ

                 ಗಾಯತ್ರಿ - ಒಂದು ಅಪರೂಪದ ಚಿಟ್ಟೆ


ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಆದರೂ ಇನ್ನು ಹಲವಾರು ಕುಟುಂಬಗಳಲ್ಲಿ ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಹೆಣ್ಣು ಮನೆಯ ಬೆಳಗುವ ದೀಪ ಎನ್ನುವ ಬದಲು ಮನೆಯ ಕೆಲಸದ ಆಳಾಗಿ ಕಾಣುವುದೇ ಹೆಚ್ಚು. ಪಟ್ಟಣಗಳಲ್ಲಿ ಮಕ್ಕಳಿಗೆ ಸಮನಾದ ಹಕ್ಕು ಮತ್ತು ಶಿಕ್ಷಣವನ್ನು ನೀಡುತ್ತಿದ್ದರು ಹಳ್ಳಿಗಳಲ್ಲಿ ಇದನ್ನು ಸಾಧಿಸುವುದು ಸ್ವಲ್ಪಮಟ್ಟಿಗೆ ಸಮಸ್ಯೆ ಎನಿಸಿದೆ.


ಇದಕ್ಕೆ ಒಂದು ಉದಾಹರಣೆ ಎಂದರೆ ನನ್ನ ವಿದ್ಯಾರ್ಥಿನಿ ಗಾಯತ್ರಿ ಹಾದಿಮನಿ. ನಾನು 6ನೇ ತರಗತಿಗೆ ಹಿಂದಿನ ವರ್ಷ ಗಣಿತ ವಿಷಯವನ್ನು ಕಲಿಸುತ್ತಿದ್ದೇನು ಆ ವರ್ಷದಲ್ಲಿ ಆಕೆಯನ್ನು ಒಮ್ಮೆಯೂ ಶಾಲೆಯಲ್ಲಿ ನೋಡಲು ಸಾಧ್ಯವಾಗಿರಲಿಲ್ಲ. ಆಕೆಯ ಮನೆಗೆ ಭೇಟಿ ನೀಡಿ ಅವಳ ಪಾಲಕರೊಂದಿಗೆ ಸಂವಾದ ಹಲವು ಬಾರಿ ನಡೆಸಿದರು ಅದು ಫಲ ಕೊಡಲಿಲ್ಲ. ಮುಂದಿನ ವರ್ಷವೂ ಹೀಗೆಯೇ ನಡೆದರೆ ಹೇಗೆ ಎಂದು ಯೋಚಿಸುತ್ತಲೇ ಒಂದು ವರ್ಷದ ಅವಧಿ ಮುಗಿದೆ ಹೋಯಿತು.


ಶೈಕ್ಷಣಿಕ ವರ್ಷದ ಆರಂಭದಲ್ಲಿ ಆಕೆ ಊರಿನಲ್ಲಿ ಇರುವ ಮಾಹಿತಿ ಸಿಕ್ಕ ಕಾರಣಕ್ಕೆ ಆಕೆಯನ್ನು ಭೇಟಿಯಾಗಲೆಂದು ಪ್ರಧಾನ ಗುರುಗಳನ್ನು ಜೊತೆಗೆ ಕರೆದುಕೊಂಡು ಅವರ ಮನೆಗೆ ಹೋಗಿಯೇ ಬಿಟ್ಟೆ. ಅವರ ಮನೆಯಲ್ಲಿ ಅವರ ಪಾಲಕರ ಮುಂದೆ ಆಕೆಯನ್ನು ಮಾತನಾಡಿಸಿ ಶಾಲೆಗೆ ಕರೆತರುವ ಪ್ರಯತ್ನ ಮಾಡಲಾಯಿತು. 


ನಾವು ಕರೆದಿದ್ದಕ್ಕೂ ಅಥವಾ ಅವಳ ಮನಸ್ಸಿಗೆ ಮೂಡಿಯೋ ತಿಳಿದಿಲ್ಲ ಆಕೆ ಶಾಲೆಗೆ ಬರಲು ಆರಂಭಿಸಿದಳು. ಅವಳ ಆಗಮನ ನನಗೆ ಖುಷಿ ಅನ್ನಿಸಿತು ಸ್ವಲ್ಪ ದಿನಗಳ ನಂತರ ಅವಳೊಡನೆ ನಾನು ಮಾತನಾಡ ತೊಡಗಿದೆ. ಅವಳು ತನ್ನ ಸಮಸ್ಯೆಗಳನ್ನು ಹೇಳಿಕೊಂಡಳು ಆಕೆ ಶಾಲೆಗೆ ಗೈರು ಹಾಜರಾಗಲು ಮತ್ತು ಶಾಲೆಯಿಂದ ದೂರವಿರಲು ಕಾರಣವೆಂದರೆ ಅವಳು ಅಭ್ಯಾಸದ ವಿಷಯಗಳಲ್ಲಿ ಬಹಳ ಹಿಂದೆಯಿದ್ದಳು. ಅವಳಿಗೆ ತರಗತಿಯಲ್ಲಿ ಎಲ್ಲರೂ ಹೀಯಾಳಿಸುತ್ತಿದ್ದರು ಅವರ ಹೀಯಾಳಿಸುವಿಕೆ ಅವಳಿಗೆ ಬಹಳ ನೋವಿಡುತ್ತಿತ್ತು. ಇದನ್ನು ಅರಿತ ನಾನು ಎಲ್ಲರ ಸಮ್ಮುಖದಲ್ಲಿ ಒಂದು ಕಥೆಯನ್ನು ಹೇಳಿದೆ ಆ ಕಥೆಯ ಅರ್ಥ ಎಲ್ಲರನ್ನು ಸಮಾನವಾಗಿ ಕಾಣುವುದಾಗಿತ್ತು ಇದನ್ನು ಅರ್ಥೈಸಿಕೊಂಡು ನನ್ನ ಎಲ್ಲ ವಿದ್ಯಾರ್ಥಿಗಳು ಅವಳೊಡನೆ ಸರಿಯಾದ ರೀತಿಯಲ್ಲಿ ವ್ಯವಹರಿಸಲು ಪ್ರಾರಂಭಿಸಿದರು.


ಹೀಗೆ ನಡೆದಂತೆ ಆಕೆಯ ಆಸಕ್ತಿಯನ್ನು ಹುಡುಕುವ ಪ್ರಯತ್ನ ಆರಂಭಿಸಿದೆ. ಅವಳು ತರಗತಿಯ ಶುಚಿಯ ಕಾರ್ಯವನ್ನು ಬಹಳ ಸೊಗಸಾಗಿ ಮಾಡುವುದು ಕಂಡಿತು. ಒಮ್ಮೆ ಆಕೆಗೆ ನಾಯಕತ್ವ ಕೊಟ್ಟರೆ ಹೇಗಿರಬಹುದು ಎಂದು ನೋಡಲು ಆಕೆಗೆ ಪ್ರತಿದಿನ ಶಾಲೆಗೆ ಬರುವ ಎಲ್ಲಾ ಮಕ್ಕಳ ಶಿಸ್ತು ನೋಡುವ ಹಾಗೂ ಶಾಲೆಗೆ ಬಂದ ನಂತರ ಯಾವ ವಿದ್ಯಾರ್ಥಿಯು ಹೊರಗಡೆ ಹೋಗದಂತೆ ನೋಡಿಕೊಳ್ಳುವ ಕಾರ್ಯವನ್ನು ನೀಡಿದ್ದೆ ಆಕೆ ಅದನ್ನು ನಿರ್ವಹಿಸಿದ ರೀತಿ ಉಳಿದೆಲ್ಲರಿಗೂ ಒಂದು ಮಾದರಿ ಎಂಬಂತೆ ಇತ್ತು. ಸಂಪೂರ್ಣ ವರ್ಷ ಆಕೆ ತನ್ನ ನಾಯಕತ್ವವನ್ನು ತೋರಿದಳು. 


ಪಠ್ಯೇತರ ವಿಷಯಗಳೊಂದಿಗೆ ಪಠ್ಯ ಮುಖ್ಯ ಆದುದರಿಂದ ಆಕೆಯನ್ನು ತರಗತಿಯಲ್ಲಿ ಓದುವ ವಿದ್ಯಾರ್ಥಿಗಳೊಂದಿಗೆ ಸೇರಿಸಿ ಅಭ್ಯಾಸದ ಕಡೆಗೂ ಆಕೆಯ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಇದೆಲ್ಲದರ ಫಲವಾಗಿ ಆಕೆ ಒಂದೇ ಒಂದು ದಿನವು ಶಾಲೆಗೆ ತಪ್ಪಿಸದೆ ಶಾಲೆಗೆ ಬರಲು ಆರಂಭಿಸಿದಳು. ಅನಾರೋಗ್ಯದ ಸಮಸ್ಯೆಯಲ್ಲಿಯೂ ತರಗತಿಯನ್ನು ತಪ್ಪಿಸಲು ವಲ್ಲದೆ ಶಾಲೆಗೆ ಬರುವ ಅವಳ ತವಕ ನನಗೆ ಬಹಳ ಸೊಗಸನಿಸಿತು.


ನನ್ನ ತರಗತಿಯಲ್ಲಿ ಆಯೋಜಿಸುವ ಪ್ರತಿ ಕಾರ್ಯಕ್ರಮದಲ್ಲಿಯೂ ಆಕೆಯ ಭಾಗವಹಿಸುವಿಕೆ ನನಗೆ ಬಹಳ ಖುಷಿ ನೀಡುತ್ತದೆ. ಅವಳು ಮಾಡುವ ಪ್ರಯತ್ನ ಚಿಕ್ಕದಾಗಿದ್ದರು ಅದರ ಹಿಂದಿನ ಪ್ರಯತ್ನಗಳು ಬಹಳ ದೊಡ್ಡದನಿಸುತ್ತದೆ. ನೀಡುವ ಯಾವುದೇ ಕಾರ್ಯವಾದರೂ ಚಾಚು ತಪ್ಪದೇ ಮಾಡುತ್ತಿರುವುದು ಒಂದು ಸುಂದರ ಬೆಳವಣಿಗೆ. ಇದು ಇನ್ನಿತರರಿಗೂ ಒಂದು ಮಾದರಿ ಎಂದರೆ ತಪ್ಪಾಗಲಾರದು.





Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023