ಮುಗ್ಧ ಮನಸಿನ, ಮುದ್ದು ಮಗು........


ಮುಗ್ಧ ಮನಸಿನ, ಮುದ್ದು ಮಗು.....

                                     

              

                  ಅದೊಂದು ದೊಡ್ಡ ಊರು ಹೆಸರು ಬ್ರಹ್ಮಪುರಿ..... ಒಂದು ಕಾಲದಲ್ಲಿ ಇತಿಹಾಸ ಸೃಷ್ಟಿಸಿದ ಊರು. ನೂರಕ್ಕೂ ಹೆಚ್ಚು ಭಾವಿ, ನೂರಕ್ಕೂ ಹೆಚ್ಚು ದೇವಸ್ಥಾನಗಳನ್ನು ಹೊಂದಿರುವ, ಧಾರವಾಡ ತಾಲೂಕಿನಲ್ಲೇ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಊರು,ಎಲ್ಲೆಂದರಲ್ಲಿ ಹಸಿರು ಗಿಡಗಳು, ಬಳ್ಳಿಗಳು ಹಬ್ಬುತ್ತ ಹೆಬ್ಬಳ್ಳಿ ಎಂದು ಕರೆಸಿಕೊಂಡಿತು.


ಈ ಊರು ನನಗೆ ತೀರಾ ಮನಸಿಗೆ ಹತ್ತಿರವಾದಂತ ಊರು, ಏಕೆಂದರೆ  ಇದು ನನ್ನ ತಾಯಿಯ ತವರು ಮನೆ. ಅಂದರೆ ನನ್ನ ಅಜ್ಜ ಅಜ್ಜಿಯ ಊರು,ಬೇಸಿಗೆ ರಜೆ ಬಂದಾಗಲೇಲ್ಲಾ ಇಲ್ಲಿಗೆ ಬರುತ್ತಿದ್ದೆ,.ನನ್ನ ಬಾಲ್ಯವನ್ನು ಇಲ್ಲೆ ಕಳೆದಿದ್ದೇನೆ, ಇಲ್ಲಿ ನನ್ನ ಅಜ್ಜಿಯ ಕಾಲದಿಂದಲೂ ಪ್ರತ್ಯೇಕ ಗಂಡು, ಹೆಣ್ಣು ಮಕ್ಕಳ ಶಾಲೆಯನ್ನು ಹೊಂದಿದೆ.


ನಾನು ನಾಗವೇಣಿ ಸಂಗಳದ ಜೂನ್ 2022ರಂದು ವಿದ್ಯಾಪೋಷಕ ಸಂಸ್ಥೆಯಲ್ಲಿ ಫೆಲೋ ಟೀಚರ್ ಆಗಿ ಸೇರಿಕೊಂಡೆ, ಅಂದು ಜೋರಾದ ಮಳೆ ನಮಿತಾ ಮೇಡಂ ಜೊತೆಗೆ ನನ್ನ ಪಯಣ ಹೆಣ್ಣು ಮಕ್ಕಳ ಶಾಲೆ ಹೆಬ್ಬಳ್ಳಿ ಕಡೆಗೆ ಸಾಗಿತ್ತು, ಶಾಲೆಗೆ ಹೋದ ತಕ್ಷಣ ನಮ್ಮನ್ನು ಆ ಶಾಲೆಯ ಮುಖ್ಯಗುರುಗಳು ಮತ್ತು ಉಳಿದ ಶಿಕ್ಷಕಿಯರು ದಪ್ಪನೆಯ ಮಾಲೆ ಹಾಕಿ ಸ್ವಾಗತಿಸಿದರು, ಇದು ನಮಗೆ ಮುಜುಗರ ತಂದಿತ್ತು, ಈಗಲೂ ನಮ್ಮ ಆಫೀಸಿನಲ್ಲಿ ನಮಿತಾ ಮೇಡಂ ಮತ್ತು ನಾನು ಆ ವಿಷಯ ನೆನಪಾದಾಗೆಲ್ಲ ಎಲ್ಲರಿಗೂ ಹೇಳಿ ನಗುತ್ತಿರುತ್ತೇವೆ. ಹೀಗೆ ಸಾಗಿತು ನನ್ನ ಪಯಣ. 


ಮೊದಲನೇ ಸಾರಿ ತರಗತಿಗೆ ಹೋದಾಗ ನನಗೆ ಅಚ್ಚರಿ ಕಾದಿತ್ತು, ಏಕೆಂದರೆ ಅಲ್ಲಿ ಒಂದು ತರಗತಿಯಲ್ಲಿ ಸುಮಾರು 90 ಮಕ್ಕಳು, ಶಾಲೆಯ ಒಟ್ಟು ಮಕ್ಕಳ ಸಂಖ್ಯೆ 600ರ ಹತ್ತಿರ. ಆಗ ನನಗೆ ಮುಖ್ಯಗುರುಗಳು ಏಕೆ ಅಷ್ಟು ದೊಡ್ಡ ಮಾಲೆ ಹಾಕಿ ಸನ್ಮಾನಿಸಿದರು ಎಂದು ಅರಿವಿಗೆ ಬಂದಿತು. ಅಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವದರಿಂದ ಶಿಕ್ಷಕರ ಕೊರತೆ ಇತ್ತು, ಹೀಗಾಗಿ ನನ್ನನ್ನು 5ನೇ ಅ ತರಗತಿಗೆ ಶಿಕ್ಷಕಿಯಾಗಿ ಇಂಗ್ಲಿಷ್ ವಿಷಯ ಹೇಳಬೇಕಿತ್ತು,6 ಮತ್ತು 7 ಅ ಮತ್ತು ಬ ತರಗತಿಗೆ ವಿಜ್ಞಾನ ವಿಷಯವನ್ನು ಭೋದಿಸಲು ನೇಮಿಸಿದರು. 

           

ಒಂದು ದಿನ ಪಾಠ ಹೇಳುವಾಗ, ಅಲ್ಲೊಂದು ಮಗು ಮುಗ್ದ ನಗುವನ್ನು ಬೀರಿತ್ತು, ಅವಳೇ ಮುಗ್ದ ನಗುವಿನ ಮುದ್ದು ಮಗು ಹೆಸರು ಭಾಗ್ಯ. ಅವಳು ಬೇರೆ ಖಾಸಗಿ ಶಾಲೆಯಿಂದ ಈ ಶಾಲೆಗೆ 5ನೇ ತರಗತಿಯಲ್ಲಿ  ಹೊಸದಾಗಿ ಸೇರಿಕೊಂಡಿದ್ದಳು. ಅವಳ ಆ ಕಣ್ಣುಗಳು ಕನಸುಗಳ ಸಾಗರವನ್ನೆ ಹೊತ್ತು ತಂದ ಹಾಗೆ ಹೊಳೆಯುತ್ತಿದ್ದವು. ಅವಳಿಗೆ ನನ್ನಲ್ಲಿ ಏನೊ ಕುತೂಹಲ ಯಾವಾಗಲು ಅವಳ ದೃಷ್ಟಿ ನನ್ನ ಕಡೆಗೆ. ಆದರೆ ಮಾತನಾಡುತ್ತಿರಲಿಲ್ಲ ತೀರಾ ಸೂಕ್ಷ್ಮ ಸ್ವಭಾವದವಳು. ಆದರೆ ತುಂಬಾ ಜಾಣೆ ಅವಳ ಅಕ್ಷರಗಳು ಒಂದೊಂದು ಮುತ್ತು ಪೋನಸಿದಹಾಗೆ, ಯಾವಾಗಲು ಮನೆಕೆಲಸ ಕೊಟ್ಟರೆ ಸರಿಯಾಗಿ ಬರೆದುಕೊಂಡು ಬಂದಿರುತ್ತಿದ್ದಳು, ಆದರೆ ಅವಳ ಜಾಣತನ ಎಲೆ ಮರೆಯ ಕಾಯಿಯಂತಾಗಿತ್ತು.   


ಅಷ್ಟರಲ್ಲಿ ನನಗೆ ಅರಿವಾಗಿದ್ದು ಒಂದೇ “ಅವಳನ್ನು ಆ ಹೆದರಿಕೆ ಮತ್ತು ಸಂಕೋಚ ಎನ್ನುವ ಎರಡು ಅಡ್ಡಗೋಡೆಗಳು ಅವಳನ್ನು ಮುಂದೆ ಬರಲು ಬಿಡುತ್ತಿಲ್ಲ” ಎಂದು ದಿನೇ ದಿನೇ ನಾನು ನನ್ನ ಟ್ರೇನಿಂಗ್ನಲ್ಲಿ ಕಳೆತಿದ್ದ ಕೆಲವು ತರಗತಿಯ ತಂತ್ರಗಳನ್ನು ಉಪಯೋಗಿಸಿಕೊಂಡು ಪಾಠಮಾಡತೊಡಗಿದೆ, ಮೊದಲು ಕೆಲ ಆಟಗಳ ಮೂಲಕ ಪಾಠ ಮಾಡುವುದು, ಅವರಿಗೆ ಅರ್ಥವಾಗುವ ಹಾಗೆ ಅವರ ನಿಜ ಜೀವನದ ಉದಾಹರಣೆಗಳನ್ನು ಕೊಡುತ್ತ ಪಾಠ ಮಾಡ ತೊಡಗಿದೆ, ವಾರಕ್ಕೊಮ್ಮೆ ಅವರ ಅನಸಿಕೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಟ್ಟೆ, ವಾರಕ್ಕೊಮ್ಮೆ ರಸಪ್ರಶ್ನೆ ಸ್ಪರ್ಧೆ, ಚಿತ್ರ ಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದ್ದೆ.


ಒಂದು ದಿನ ಚಿತ್ರಕಲೆ ಸ್ಪರ್ಧೆ ಇಟ್ಟಾಗ ಅವಳು ಚಿತ್ರ ಬಿಡಿಸಿದ್ದಳು ಹತ್ತಿರಹೋಗಿ ನೋಡಿದೆ ತುಂಬಾ ಸುಂದರವಾಗಿ ಬಿಡಿಸಿದ್ದಳು ಅದಕ್ಕೆ ನಾನು ಖುಷಿಯಿಂದ ವೆರಿ ಗುಡ್ ಎಂದು ಉದ್ಗರಿಸಿದೆ ಆಗ ಅವಳ ಕಣ್ಣುಗಳಲ್ಲಿ ಅದೇ ಹೊಳಪು ಖುಷಿಯಿಂದ ನಸು ನಕ್ಕಳು, ನಾನು ಇನ್ನು ಒಂದು ಹೆಜ್ಜೆ ಹೋಗಿ ಎಲ್ಲರು ಅವಳಿಗೆ ಚಪ್ಪಾಳೆ ಹಾಕಿ ಎಂದೆ ಆಗ ಅವಳು ತೀರಾ ಸಂತೋಷಗೊಂಡು ಥ್ಯಾಂಕ್ಯು ಟೀಚರ್ ಅಂದಳು ಆಗ ನನಗೆ ಏನೊ ಸಾಧಿಸಿದ ಅನುಭವ,ಹೀಗೆ ಸಾಗಿತು ನಮ್ಮ ದಿನಚರಿ. ದಿನೇ ದಿನೇ ಕಳೆದಂತೆ ಅವಳು ನನಗೆ ಹತ್ತಿರವಾಗುತ್ತ ಹೋದಳು, ಎಲ್ಲ ಮಕ್ಕಳೊಂದಿಗೂ ಬೆರೆತು ಆಟ ಆಡುವುದು, ಊಟ ಮಾಡುವುದು ಮಾಡತೊಡಗಿದಳು.


ಏಪ್ರಿಲ್ 5ರಂದು ಸ್ಲಾಮ್ ಔಟ್ ಲೌಡ್ ಅವರ ಕಾರ್ಯಕ್ರಮ ನರೇಂದ್ರ ಶಾಲೆ ಯಲ್ಲಿ ನಡೆಯಿತು ಅಂದು ಅವಳು ಭಾಗವಹಿಸಿದಳು ಮತ್ತು ಧೈರ್ಯದಿಂದ ಯಾವುದೇ ಸಂಕೋಚವು ಇಲ್ಲದೆ ತಾನು ಚಿತ್ರಿಸಿದ ಚಿತ್ರಗಳನ್ನು ಪ್ರದರ್ಶಿಸಿದಳು. ಇಂದು ಅವಳು ತನ್ನ ಎಲ್ಲ ಹೆದರಿಕೆ ಮತ್ತು ಸಂಕೋಚದ ಗೋಡೆಯನ್ನು ದಾಟಿ ತನ್ನ ಕನಸುಗಳನ್ನು ಬೆನ್ನಟ್ಟಿದ್ದಾಳೆ. ಹೀಗೆ ಭಾಗ್ಯಳಂತೆ ಎಷ್ಟೋ ಮಕ್ಕಳು ತಮ್ಮ ಕಣ್ಣುಗಳಲ್ಲಿ ಕನಸುಗಳ ಸಾಗರಗಳನ್ನೇ ಹೊತ್ತು ಶಾಲೆಗೆ ಬಂದಿರುತ್ತಾರೆ. ಅಂತವರನ್ನು ಶಿಕ್ಷರಾದ ನಾವು ಗುರುತಿಸಬೇಕಷ್ಟೆ ಮತ್ತು ನಮ್ಮ ಎರಡು ಹೊಗಳಿಕೆಯ ಮಾತುಗಳು, ನಾವು ತೋರಿಸುವ ಪ್ರೀತಿ, ನಾವು ಕಲ್ಪಿಸಿಕೊಡುವ ಸಣ್ಣ ಪುಟ್ಟ ಅವಕಾಶಗಳು ಅವರ ಜೀವನವನ್ನೇ ಬದಲಿಸುತ್ತದೆ.



-ನಾಗವೇಣಿ ಸಂಗಳದ

ಸರಕಾರಿ ಮಾದರಿ ಕನ್ನಡ

ಹೆಣ್ಣು ಮಕ್ಕಳ ಶಾಲೆ ಹೆಬ್ಬಳ್ಳಿ







 

Comments