ಮಕ್ಕಳ ಪ್ರತಿಭೆ🌷🌷🌷
2024-25 ನೇ ಸಾಲಿನ ಅಮ್ಮಿನಭಾವಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಪ್ರತಿಭಾ ಕಾರಂಜಿ ಒಂದು ನವೀನ ಕಾರ್ಯಕ್ರಮವಾಗಿದ್ದು, ಅಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆಗಳನ್ನು ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲಾಗುತ್ತದೆ. ಈ ವರ್ಷದ ಅಮ್ಮಿನಭಾವಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಾಪುರದಲ್ಲಿ ದಿನಾಂಕ 10/10/2024 ರಂದು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಒಂದು ವಾರದಿಂದ ಸಿದ್ಧತೆ ನಡೆಸಲಾಗಿತ್ತು. ಆಮಂತ್ರಣ ಪತ್ರಿಕೆ, ಪ್ರಮಾಣ ಪತ್ರ, ಬ್ಯಾನರ್, ಬ್ಯಾಡ್ಜ್ ಹಾಗೂ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು
ಅಂದು ಮುಂಜಾನೆ ಎಲ್ಲಾ ಶಿಕ್ಷಕರನ್ನು ಹಾಗೂ ನಿರ್ಣಾಯಕರನ್ನು ಬ್ಯಾಡ್ಜ್ ನೀಡುವ ಮೂಲಕ ಸ್ವಾಗತಿಸಲಾಯಿತು. ನಂತರ ಕಾರ್ಯಕ್ರಮವನ್ನು ಪ್ರಾರಂಭಿಸಿ ನಮ್ಮ ಶಾಲೆಯ ಮುಖ್ಯ ಗುರುಗಳು ಎಲ್ಲಾ ಅತಿಥಿಗಳನ್ನು ಹಾಗೂ ಎಲ್ಲಾ ಶಾಲೆಯ ಶಿಕ್ಷಕರನ್ನು ಸ್ವಾಗತಿಸಿದರು. ನಂತರ ಸಸಿಗೆ ನೀರು ಹಾಕುವುದರ ಹಾಗೂ ಸ್ವತಂತ್ರದ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ದೇಣಿಗೆಯನ್ನು ನೀಡಿದ ಎಲ್ಲಾ ಶಿಕ್ಷಕರು, ಊರಿನ ನಾಗರಿಕರು, ಶಾಲಾ ಎಸ್‌ಡಿಎಂಸಿ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಅಮ್ಮಿನಭಾವಿ ಕ್ಲಸ್ಟರ್ ನ ಸಿ ಆರ್ ಪಿ ಯವರಾದ ಶ್ರೀ ಬಸವರಾಜ ಕುರುಗುಂದ ಸರ್ ಪ್ರತಿಭಾ ಕಾರಂಜಿಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿತ್ರಕಲೆ, ಅಭಿನಯ ಗೀತೆ, ಪ್ರಬಂಧ ಸ್ಪರ್ಧೆ, ದೇಶಭಕ್ತಿ ಗೀತೆ, ಭಕ್ತಿಗೀತೆ, ಕ್ಲೇ ಮಾಡ್ಲಿಂಗ್ ಇತ್ಯಾದಿ ಕಾರ್ಯಕ್ರಮಗಳನ್ನು ನಿರ್ಣಾಯಕರು ಅಚ್ಚುಕಟ್ಟಾಗಿ ನೆರವೇರಿಸಿದರು. ಕ್ಲೇ ಮಾಡ್ಲಿಂಗ್ ಸ್ಪರ್ಧೆಯಲ್ಲಿ ಮಕ್ಕಳು ವಿವಿಧ ರೀತಿಯ ಗಣಪತಿ, ಪ್ರಾಣಿಗಳು ಇತರ ವಸ್ತುಗಳ ಮಾದರಿಯನ್ನು ತಯಾರಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ಸುಂದರ ಪರಿಸರದ ಕುರಿತಾಗಿ ಚಿತ್ರವನ್ನು ಬಿಡಿಸಿದರು. ಮಧ್ಯಾಹ್ನದ ನಂತರ ಫಲಿತಾಂಶವನ್ನು ಪ್ರಕಟಿಸಲಾಯಿತು. ಎಲ್ಲ ವಿದ್ಯಾರ್ಥಿಗಳು ಖುಷಿಯಿಂದ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು. ನಮ್ಮ ಶಾಲೆಯ ಎಲ್ಲಾ ಶಿಕ್ಷಕರು, ಮಕ್ಕಳು ಹಾಗೂ ಊರಿನ ನಾಗರಿಕರು ಸೇರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದೆವು. ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ವರ್ತಿಸಿ ತಮಗೆ ನೀಡಿದ ಜವಾಬ್ದಾರಿಗಳನ್ನು ಅಚ್ಚು ಕಟ್ಟಾಗಿ ನಿಭಾಯಿಸಿದರು. ಕಾರ್ಯಕ್ರಮ ನಡೆಸಿಕೊಟ್ಟ ರೀತಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
Comments
Post a Comment